ಇನ್ನೂ ಯಾಕ ಬರಲಿಲ್ಲವ್ವಾ ಧಾರವಾಡದಾoವಾ…

------------------------------------------------------------
ಇನ್ನೂ ಯಾಕ ಬರಲಿಲ್ಲವ್ವಾ ಧಾರವಾಡದಾoವಾ...
ಲಗೂನ ಹೋಗಿ ಬರತೇನಿ ಅಂತ ಹೇಳಿ ಹೋದಾoವಾ...

ಕಳವಂತ ಮಾರಿ ಧಾಡಸಿ ನಿಲುವು ಹುರಿ ಮೀಸಿ ಬಿಟ್ಟಾoವಾ
ಅಗಲ ಹಣಿ ಹೋಳಿಯು ಕಣ್ಣು ಹುಬ್ಬು ಏರಿಸಾoವಾ
ತುಂಟ ನಗಿ ಮುಖದಾಗ ಹರಿ ಬಿಟ್ಟು ತೇಲಿಸಿಬಿಡಾoವಾ
ವಾರೀ ಕಣ್ಣಿಲೆ ನೋಡಿ ಎಲ್ಲಾರನೂ ಮಳ್ಳ ಮಾಡಾoವಾ...
ಇನ್ನೂ ಯಾಕ ಬರಲಿಲ್ಲವಾ...

ಖಡಕ್ ನೀರಗಿ ಬಿಳೆ ಧೋತ್ರಾ ಉಟಗೊಂಡ ಬರಾoವಾ
ಇಸ್ತ್ರಿ ಮಾಡಿ ಗರಿ ಗರಿ ಶರ್ಟು ಹಾಕ್ಕೊಂಡ ಬರಾoವಾ
ಚರ್ಮದ ಕಾಲ್ಮರಿ ಮೆಟ್ಟಿಗೊಂಡ ಗಿರ್ಕಿಲೆ ನಡಿಯಾoವಾ
ಮೀಸಿ ತಿರುವುಕೋತ ಹತ್ತಿರ ಬಂದು ಮುಸಿ ಮುಸಿ ನಗಾoವಾ
ಇನ್ನೂ ಯಾಕ ಬರಲಿಲ್ಲವಾ...

ಮಾತು ಮಾತಿಗೆ ಆಡಿಸ್ಯಾಡಕೋತ ನಕ್ಕ ನಗಸಾoವಾ
ಬೇಕಂತ ಕಾಡಿಸಗೋತ ಗೋಳುಹೊಯ್ಕೊಳಾoವಾ
ಅರುಳು ಹುರಿದಂಗ ಮಾತಾಡಿ ಮಳ್ಳ ಮಾಡಾoವಾ
ತಾನ ಎಂದೂ ಮಾತಿನೊಳಗ ಸಿಕ್ಕೊಳ್ಳದ ಇರಾoವಾ
ಇನ್ನೂ ಯಾಕ ಬರಲಿಲ್ಲವಾ...

ಎಲ್ಲಾದಕೂ ತಾನ ಮುಂದ ಇರತೇನಿ ಅನ್ನಾoವಾ
ಎಲ್ಲಾದರಾಗೂ ತಂದ ಒಂದ ಅಕ್ಕಿಕಾಳ ಹಾಕಾoವಾ
ಕಿರ್ಯಾರ ಜೊತಿ ಕಿರ್ಯಾ ಆಗಿ ಹುಡುಗಾಟ ಮಾಡಾoವಾ
ಹಿರ್ಯಾರ ಜೊತಿ ಹಿರ್ಯಾರಂಗ ಪಂಟ ಬಡಿಯಾoವಾ
ಇನ್ನೂ ಯಾಕ ಬರಲಿಲ್ಲವಾ...

ಹೊಲಾ ಮನಿ ರೊಕ್ಕಾ ಐತಂತ ದೊಡ್ಡಸ್ತಿಕಿ ತೋರ್ಸಾoವಾ
ತ್ರಾಸ ಐತಿ ಸಾಲಾ ಕೊಡು ಅಂದ್ರ ಹಿಂದಕ ಸರಿಯಾoವಾ
ಕಿಸೇದಾಗಿಂದ ನೋಟಿನಕಟ್ಟ ಹಿರದ ತೋರ್ಸಾoವಾ
ಯಾರಾರ ಕೇಳತಾರಂತ ವಾಪಸ ಇಟಗೊಂಡಬಿಡಾoವಾ
ಇನ್ನೂ ಯಾಕ ಬರಲಿಲ್ಲವಾ...

ಭಾಳ ಹೊಟ್ಟಿ ಹಸದೇತಿ ಅಂತ ಅವಸರಾ ಮಾಡಾoವಾ
ಲಗು ಲಗು ಊಟಾಮಾಡಿ ಕೈ ತೊಳಕೊಂಡ ಬಿಡಾoವಾ
ಸುಣ್ಣಾ ಸವರಿ ಹಾಲಡಕಿ ಕಡಿದು ಅಂಬಾಡಿಎಲಿ ಜಡಿಯಾoವಾ
ಕೆಂಪನ ತುಟಿ ನಡುವ ಬಟ್ಟಿಟ್ಟು ಪಿಚಕ್ಕಂತ ಉಗಳಾoವಾ
ಇನ್ನೂ ಯಾಕ ಬರಲಿಲ್ಲವಾ...

ಬ್ಯಾರೆಯವರು ಮರುಗಿದರ ಕರಳು ಚುರಕ್ಕ್ ಅಂತೈತನ್ನಾoವಾ
ಬಡವ ಬಗ್ಗರು ಮನಿ ತನಾ ಬಂದರ ಸಹಾಯ ಮಾಡಾoವಾ
ಏನೂ ಚಿಂತಿ ಮಾಡಬ್ಯಾಡ್ರಿ ನಾ ಅದೇನಿ ಅನ್ನಾoವಾ
ನಂಬಿಕಿ ಇಡ್ರಿ ನಾ ಇರತೇನಲ್ಲಾ ಅಂತ ಹೇಳಾoವಾ
ಇನ್ನೂ ಯಾಕ ಬರಲಿಲ್ಲವಾ...

ತನ್ನೂ ಚಿಂತಿ ಮಂದಿ ಖುಷಿಯೊಳಗ ಮರತಬಿಡಾo ವಾ
ಜೀವನದಾಗ ಏನೈತಿ ನಕ್ಕೋತ ಇರಬೇಕನ್ನಾoವಾ
ತಾನೂ ನಕ್ಕು ಎಲ್ಲಾರನೂ ನಗಿಸಿ ಹೌದೆನಿಸಿಕೊಂಡಾoವಾ
ಒಂದ ಜೀವನಾ ನಮ್ಮ ಲೆಕ್ಕದಾಗ ಇದ್ದು ಹೋಗಬೇಕನ್ನಾoವಾ...

ಇನ್ನೂ ಯಾಕ ಬರಲಿಲ್ಲವ್ವಾ ಧಾರವಾಡದಾoವಾ...
ಲಗೂನ ಹೋಗಿ ಬರತೇನಿ ಅಂತ ಹೇಳಿ ಹೋದಾoವಾ...

-----------------------------------------------------------
ಬಸವರಾಜ ಗದಿಗೆಪ್ಪಗೌಡರ
ಬೆಂಗಳೂರು, ಜುಲೈ,೨೦೨೫







One thought on “ಇನ್ನೂ ಯಾಕ ಬರಲಿಲ್ಲವ್ವಾ ಧಾರವಾಡದಾoವಾ…

  1. ಇದು “ಇನ್ನೂ ಯಾಕ…” ಸರಣಿಯ ಕವನ “ಇನ್ನೂ ಯಾಕ ಬರಲಿಲ್ಲoವಾ ಧಾರವಾಡದಾoವಾ, ಲಗೂನ ಹೋಗಿ ಬರತೇನಿ ಅಂತ ಹೇಳಿ ಹೋದಾoವಾ”. ಇದು ಧಾರವಾಡ ಪರಿಸರದಲ್ಲಿ ಬೆಳೆದ ವಿಶಿಷ್ಟ ವ್ಯಕ್ತಿತ್ವದ ಗಂಡುಮಂಗನ ಬಗೆಯ ಚಿತ್ರಣ. ದ ರಾ ಬೇಂದ್ರೆ ಸ್ಫೂರ್ತಿ ಕವನ. ಧಾರವಾಡದ ಆಡು ಭಾಷೆಯಲ್ಲಿ.

    Like

Leave a comment